ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Friday, December 7, 2012

Prashnopanishad in Kannada-Prashna-VI (05-08)


ಹದಿನೈದು ಬೇಲಿಗಳನ್ನು ಹದಿನಾರನೇ ಜೀವನಿಗೆ ಕೊಟ್ಟವಳು ಹದಿನೇಳನೇ ಪ್ರಕೃತಿ. ಅದರಿಂದ ಬಿಡುಗಡೆಗೊಳಿಸಿ ಮೊಕ್ಷಕೊಡುವವ ಹದಿನೆಂಟನೇ ನಾರಾಯಣ. ಹಾಗಾಗಿ ವೇದಾಂತದಲ್ಲಿರುವ ಒಟ್ಟು ವಿಷಯಗಳು ಹದಿನೆಂಟೇ.
ಮೇಲೆ ಹೇಳಿದ ಹದಿನಾರು ಕಲೆಗಳಲ್ಲಿ ಹದಿನೈದು ಜಡಕಲೆ. ನಮಗೆ ತಿಳಿದಂತೆ ಅಧ್ಯಾತ್ಮದಲ್ಲಿ ಎಲ್ಲೂ ಕೇವಲ ಜಡವನ್ನು ಹೇಳುವ ಪದ್ಧತಿ ಇಲ್ಲಾ. ಆದ್ದರಿಂದ ಹೇಗೆ ಜೀವ ಕಲಾಭಿಮಾನಿ ಪ್ರಾಣದೇವರೋ ಹಾಗೇ ಇತರ ಹದಿನೈದು ಕಲೆಗಳು ಅದರ ತತ್ತ್ವಾಭಿಮಾನಿ ದೇವತೆಗಳನ್ನು ಹೇಳುತ್ತವೆ. ಈ ತತ್ತ್ವಾಭಿಮಾನಿ ದೇವತೆಗಳು ಜೀವನ ಸಾಧನೆಯ ಹಾದಿಯಲ್ಲಿನ ವಿವಿಧ ಹಂತದಲ್ಲಿರುವ ಮೆಟ್ಟಿಲುಗಳು. ಈ ದೇವತೆಗಳನ್ನು ನಾವು ಅವರ ತಾರತಮ್ಯಕ್ಕನುಗುಣವಾಗಿ ವಿವಿಧ ಹಂತದಲ್ಲಿ ಕಾಣಬೇಕು. ಮೊದಲಿಗೆ ಪುಷ್ಕರ. ಈತ ಕರ್ಮದ ಅಭಿಮಾನಿ ದೇವತೆ. ಈತ ನಮಗೆ ಸಾಧನೆಯ ಹಾದಿಯಲ್ಲಿ ಮೊದಲ ಮೆಟ್ಟಿಲು. ನಂತರ ಶನಿ. ಈತ ಭೂಮಿಯ ಅಭಿಮಾನಿ ದೇವತೆ. ಹಾಗೇ ಉಷಾದೇವಿ ಮಾತಿನ ದೇವತೆ; ಬುಧ ನೀರಿಂದ ದೇವತೆ; ಸ್ವಾಹಾದೇವಿ ಮಾತಿನ ದೇವತೆ; ಅಗ್ನಿ ಪುತ್ರ ಪಾವಕ ಬೆಂಕಿಯ ದೇವತೆ;  ವಾಯುಪುತ್ರ ಮರೀಚಿ ಗಾಳಿಯ ದೇವತೆ; ಗಣಪತಿ ಆಕಾಶದ ದೇವತೆ; ವರುಣ ವೀರ್ಯದ ದೇವತೆ; ಚಂದ್ರ ಅನ್ನದ ಅಭಿಮಾನಿ ದೇವತೆ; ಇಂದ್ರ ಇಂದ್ರಿಯಗಳ ಅಭಿಮಾನಿ ದೇವತೆ; ಗರುಡ-ಶೇಷ ರುದ್ರರು ಮನಸ್ಸಿನ ಅಭಿಮಾನಿ ದೇವತೆಯರು.  ನಂತರ ಭಾರತಿ ಅಥವಾ ಶ್ರದ್ಧಾದೇವಿ ಶ್ರದ್ಧೆಯ ಅಭಿಮಾನಿದೇವತೆ. ಪ್ರಾಣದೇವರು ಪ್ರಾಣದ ಅಭಿಮಾನಿದೇವತೆ. ಇದು ನಮ್ಮ ಸಾಧನೆಯ ಹಾದಿಯಲ್ಲಿನ ಅತ್ಯಂತ ಎತ್ತರದ ಮೆಟ್ಟಿಲು. ಈ ಮೆಟ್ಟಿಲಿನ ನಂತರ ನಮಗೆ ನೇರವಾಗಿ ಲಕ್ಷ್ಮೀ-ನಾರಾಯಣರ ದರ್ಶನ. ಈ ಎಲ್ಲಾ ಅಭಿಮಾನಿ ದೇವತೆಗಳ/ಕಲೆಗಳ ಸ್ವಾಮಿ ಆ ಭಗವಂತ. ಒಟ್ಟಿನಲ್ಲಿ ಹೇಳಬೇಕೆಂದರೆ ಇದು ನಮ್ಮ ಉಪಾಸನೆಯ ಹದಿನೆಂಟು ಮಜಲುಗಳನ್ನು ಹೇಳುತ್ತದೆ. ಹದಿನೆಂಟು ಭಾರತೀಯ ತತ್ತ್ವಶಾಸ್ತ್ರದ ಅಪೂರ್ವ ಸಂಖ್ಯೆ. ಇದು ‘ಜಯ’ವನ್ನು ಹೇಳುತ್ತದೆ. ಇಲ್ಲಿ ಈ ಹದಿನೆಂಟು ಮೆಟ್ಟಿಲುಗಳು ಸಂಸಾರದಿಂದ ಜಯಪಡೆಯಲಿಕ್ಕಾಗಿ ಇರುವ ಸಾಧನೆಯ ಮೆಟ್ಟಿಲುಗಳು.

ಸ ಯಥೇಮಾ ನಧ್ಯಃ ಸ್ಯಂದಮಾನಾಃ ಸಮುದ್ರಾಯಣಾಃ ಸಮುದ್ರಂ ಪ್ರಾಪ್ಯಾಸ್ತಂ ಗಚ್ಛಂತಿ ಭಿಧ್ಯೇತೇ ತಾಸಾಂ ನಾಮರುಪೇ ಸಮುದ್ರ ಇತ್ಯೇವಂ ಪ್ರೋಚ್ಯತೇ ಏವಮೇವಾಸ್ಯ ಪರಿದ್ರಷ್ಟುರಿಮಾಃ ಷೋಡಶಕಲಾಃ ಪುರುಷಾಯಣಾಃ
ಪುರುಷಂ ಪ್ರಾಪ್ಯಾಸ್ತಂ ಗಚ್ಛಂತಿ ಭಿಧ್ಯೇತೇ ಚಾSಸಾಂ ನಾಮರುಪೇ ಪುರುಷ ಇತ್ಯೇವಂ ಪ್ರೋಚ್ಯತೇ ಸ ಏಷೋSಕಲೋSಮೃತೋ ಭವತಿ

ಹೇಗೆ ಹರಿಯುವ ನದಿಯ ಕೊನೆಯ ಗುರಿ ಸಮುದ್ರವೋ ಹಾಗೇ, ಪ್ರತಿಯೊಬ್ಬ ಮೊಕ್ಷಯೋಗ್ಯ ಜೀವ ಹಾಗೂ ಸಕಲ ತತ್ತ್ವಾಭಿಮಾನಿ ದೇವತೆಗಳ ಕೊನೆಯ ಗುರಿ ಆ ಭಗವಂತ. ಮೋಕ್ಷವನ್ನು ಸೇರಿದ ಎಲ್ಲಾ ಜೀವರು ಭಗವಂತನನ್ನು ಸೇರುತ್ತಾರೆ. ಈ ರೀತಿ ಮೋಕ್ಷವನ್ನು ಸೇರಿದ ಮೇಲೆ ಅವರ ಸ್ವರೂಪರೂಪ, ಲಿಂಗ ಬದಲಾಗುವುದಿಲ್ಲ. ಆದರೆ  ಅವರು ಲೋಕದಲ್ಲಿ ಕಂಡಂತೆ ಬೇರೆಯಾಗಿ ಕಾಣಿಸಿಕೊಳ್ಳದೇ ಆ ಪರಮ ಪುರುಷನೊಂದಿಗಿರುತ್ತಾರೆ. ಇಲ್ಲಿ ಆ ಪರಮಪುರುಷ ಭಗವಂತನನ್ನು ಪಿಪ್ಪಲಾದರು ‘ಅಕಲಃ, ಅಮೃತಃ’ ಎಂದು ಸಂಬೋಧಿಸಿದ್ದಾರೆ. ಅಕಲಃ ಎಂದರೆ ಯಾವ ಕಲೆಗಳ ಸ್ಪರ್ಶವೂ ಇಲ್ಲದವ ಎಂದರ್ಥ. ಸಾವಿಲ್ಲದ ನಿತ್ಯಮುಕ್ತ ಭಗವಂತ ಅಮೃತಃ. ಮೊಕ್ಷಯೋಗ್ಯ ಜೀವ ಭಗವಂತನ ಅನುಗ್ರಹದಿಂದ ಹದಿನೈದು ಬೆಲಿಗಳನ್ನು ಕಳಚಿಕೊಂಡು ಸಕಲ ಕಲಾಭಿಮಾನಿದೇವತೆಗಳ ನೆರವಿನಿಂದ ಮೋಕ್ಷವನ್ನು ಪಡೆಯುತ್ತಾನೆ.  

ತದೇಷ ಶ್ಲೋಕಃ
ಅರಾ ಇವ ರಥನಾಭೌ ಕಲಾ ಯಸ್ಮಿನ್ ಪ್ರತಿಷ್ಟಿತಾಃ
ತಂ ವೇಧ್ಯಂ ಪುರುಷಂ ವೇದಯಥಾ ಮಾ ವೋ ಮೃತ್ಯುಃ ಪರಿವ್ಯಥಾ ಇತಿ

ಮೇಲೆ ವಿವರಿಸಲಾದ ವಿಷಯಗಳಿಗೆ ಸಂವಾದಿಯಾಗಿ/ಪೂರಕವಾಗಿ ಪಿಪ್ಪಲಾದರು ಈ ವೇದ ಮಂತ್ರವನ್ನು ಉಲ್ಲೇಖ ಮಾಡುತ್ತಾರೆ. “ಎಲ್ಲಾ ಕಲೆಗಳು, ಕಲಾಭಿಮಾನಿ ದೇವತೆಗಳು ಯಾರಲ್ಲಿ ಆಶ್ರಯರಾಗಿದ್ದಾರೋ  ಅವನು ಭಗವಂತ. ಹೇಗೆ ರಥದ ಚಕ್ರದ ಅರಗಿಲುಗಳು ಮದ್ಯದ ನಾಭಿಯಲ್ಲಿ ನೆಲೆಗೊಂಡಿದ್ದಾವೋ ಹಾಗೇ,  ಇಡೀ ವಿಶ್ವ  ಭಗವಂತನಲ್ಲಿ ನೆಲೆಗೊಂಡಿದೆ. ಸಮಸ್ತ ವೇದಗಳಿಂದ ವೇದ್ಯನಾದವ, ಸಾಧನೆಯಿಂದ ತಿಳಿದುಕೊಳ್ಳಲೇಬೇಕಾದ ಪರಮಪುರುಷ ಆ ಭಗವಂತ. ಇಂಥಹ ಪರಮಪುರುಷ ಭಗವಂತನನ್ನು ತಿಳಿದುಕೊಂಡಾಗ ನಮಗೆ ಸಾವು ದುಃಖವಾಗಿ ಕಾಡುವುದಿಲ್ಲ ಮತ್ತು ಸತ್ತ ಮೇಲೆ ಅಮೃತತ್ತ್ವ ನಮ್ಮಪಾಲಾಗುತ್ತದೆ”.

ತಾನ್ ಹೋವಾಚ ಚೈತಾವದೇವಾಹಮೇತತ್ ಪರಂ ಬ್ರಹ್ಮ ವೇದ ನಾತಃ ಪರಮಸ್ತೀತಿ

ಇಂಥಹ ಅತ್ಯದ್ಭುತ ಜ್ಞಾನ ಸಂದೇಶವನ್ನು ತನ್ನ ಆರುಮಂದಿ ಶಿಷ್ಯರಿಗೆ ನೀಡಿದ ಪಿಪ್ಪಲಾದರು ಕೊನೆಯಲ್ಲಿ ಹೇಳುತ್ತಾರೆ: “ನನಗೆ ತಿಳಿದಿರುವ ಎಲ್ಲಾ ಅಧ್ಯಾತ್ಮದ ರಹಸ್ಯವನ್ನು ನಾನು ನಿಮ್ಮ ಮುಂದೆ ತೆರೆದಿಟ್ಟೆ. ಇದರಿಂದಾಚೆಗೆ ನನಗೆ ಏನೂ ತಿಳಿದಿಲ್ಲ.” ಎಂದು. ಪಿಪ್ಪಲಾದರ ಈ ಮಾತಿನ ಹಿಂದಿನ ಸೌಜನ್ಯ ಅಪೂರ್ವವಾದುದು.  

ತೇ ತಮರ್ಚಯಂತಸ್ತ್ವಂ ಹಿ ನಃ ಪಿತಾ ಯೋSಸ್ಮಾಕಮವಿಧ್ಯಾಯಾಃ ಪರಂ ಪಾರಂ ತಾರಯಸೀತಿ ನಮಃ ಪರಮಋಷಿಭ್ಯೋ ನಮಃ ಪರಮಋಷಿಭ್ಯಃ

ಪಿಪ್ಪಲಾದರ ಉಪದೇಶವನ್ನು ಕೇಳಿದ ಆರು ಮಂದು ಋಷಿಗಳು ಬಹಳ ಸಂತೋಷದಿಂದ ಹೇಳುತ್ತಾರೆ: “ಗುರುಗಳೇ, ನಮ್ಮ ಬಾಳು ಧನ್ಯವಾಯಿತು. ನಿಮ್ಮಿಂದ ನಮಗೆ ಸತ್ಯದ ದರ್ಶನವಾಯಿತು. ನೀವು ನಮಗೆ ಜ್ಞಾನದ ದೇಹವನ್ನು ಕೊಟ್ಟ ತಂದೆ. ಅಜ್ಞಾನದ ಕಡಲಲ್ಲಿದ್ದ ನಮಗೆ ನೀವು ಜ್ಞಾನದ ತಡಿಯನ್ನು ತೋರಿದಿರಿ. ನಮಗಿನ್ನೇನು ಬೇಕು” ಎಂದು. ಮನುಷ್ಯಜನ್ಮದ ಏಕಮಾತ್ರ ಸಾರ್ಥಕ್ಯ ಎಂದರೆ ಅಜ್ಞಾನದಿಂದ ಜ್ಞಾನದ ಕಡೆಗೆ ಪಯಣಿಸಿ, ಕತ್ತಲಿನಿಂದ ಬೆಳಕಿಂದ ಕಡೆಗೆ ಪಯಣಿಸಿ, ಸಾವಿನಿಂದ ಅಮೃತತ್ವವನ್ನು ಪಡೆಯುವುದು.  “ನೀವು ನಮ್ಮನ್ನು  ಸಂಸಾರದ ಗಡಿ ದಾಟಿಸಿ ಮೋಕ್ಷದತ್ತ ಹಾಯಿಸಿದಿರಿ” ಎಂದು ಹೇಳಿದ ಋಷಿಗಳು ಕೊನೆಯಲ್ಲಿ ಹೇಳುತ್ತಾರೆ:  “ಪರಮಋಷಿಭ್ಯೋ ನಮಃ ಪರಮಋಷಿಭ್ಯಃ” ಎಂದು. ಅಂದರೆ “ಪರಮಋಷಿಗಳಿಗೆ ನಮಸ್ಕಾರ, ಪರಮ ಋಷಿಗಳಿಗೆ ನಮಸ್ಕಾರ” ಎಂದರ್ಥ. ಋಷಿ ಎಂದರೆ ಜ್ಞಾನಿ. ಪರಮಋಷಿ ಎಂದರೆ ಪೂರ್ಣಜ್ಞಾನಿ. ಭಗವಂತ ಒಬ್ಬನೇ ಪೂರ್ಣ ಜ್ಞಾನಿ. “ಸರ್ವಜ್ಞನಾದ ಭಗವಂತನ ಅನಂತರೂಪಗಳಿಗೆ ನಮ್ಮ ನಮಸ್ಕಾರ; ಭಗವಂತನನ್ನು ತಿಳಿದ ಎಲ್ಲಾ ಜ್ಞಾನಿ ಶ್ರೇಷ್ಠರಿಗೆ ನಮಸ್ಕಾರ; ವಿಶೇಷವಾಗಿ ನಮಗೆ ಜ್ಞಾನವನ್ನು ಕೊಟ್ಟ ಪಿಪ್ಪಲಾದರಿಗೆ ನಮಸ್ಕಾರ” ಎಂದು ನಮಸ್ಕರಿಸಿದರು ಎನ್ನುವಲ್ಲಿಗೆ ಪ್ರಶ್ನೋಪನಿಷತ್ತಿನ ಈ ಅತ್ಯದ್ಭುತ ಉಪದೇಶ ಕೊನೆಗೊಳ್ಳುತ್ತದೆ.

ಇತಿ ಪ್ರಶ್ನೋಪನಿಷದಿ ಷಷ್ಠಃ ಪ್ರಶ್ನಃ
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಆರನೇ ಪ್ರಶ್ನೆ/ಅಧ್ಯಾಯ ಮುಗಿಯಿತು
*******
|| ಸರ್ವೇ ಜನಾಃ ಸುಖಿನೋ ಭವಂತು - ಶ್ರೀ ಕೃಷ್ಣಾರ್ಪಣಮಸ್ತು ||

Wednesday, December 5, 2012

Prashnopanishad in Kannada-Prashna-VI (03-04)


ಸ ಈಕ್ಷಾಚಕ್ರೇ ಕಸ್ಮಿನ್ ನ್ವಹಮುತ್ಕ್ರಾಂತ ಉತ್ಕ್ರಾಂತೋ ಭವಿಷ್ಯಾಮಿ ಕಸ್ಮಿನ್ ವಾ ಪ್ರತಿಷ್ಟಿತೇ ಪ್ರತಿಷ್ಟಸ್ಯಾಮೀತಿ

ಸೃಷ್ಟಿಯ ಆರಂಭದಲ್ಲಿ ಭಗವಂತ ತನ್ನ ಸೃಷ್ಟಿಯ ಕುರಿತು ಹೀಗೆ ಆಲೋಚಿಸಿದ: “ನಾನು ಸೃಷ್ಟಿಮಾಡಿದ ಮೇಲೆ ಪ್ರತಿಯೊಂದು ವಸ್ತುವಿನ ಒಳಗೂ ನಾನು ತುಂಬುತ್ತೇನೆ. ಜೀವನನ್ನು ಧಾರಣೆ ಮಾಡಿ ನಾನು ದೇಹವನ್ನು ಪ್ರವೇಶಿಸುತ್ತೇನೆ ಮತ್ತು ಆ ಜೀವದ ಆಯುಸ್ಸು ಮುಗಿದಾಗ ಹೊರಬರುತ್ತೇನೆ” ಎಂದು. ಆದ್ದರಿಂದ ಹುಟ್ಟುವುದು ಎಂದರೆ ಜೀವನ ಜೊತೆಗೆ ಭಗವಂತ ದೇಹ ಪ್ರವೇಶ ಮಾಡುವುದು ಹಾಗೂ ಸಾಯುವುದು ಎಂದರೆ ಜೀವನನ್ನು ಹಿಡಿದುಕೊಂಡು ದೇಹದಿಂದ ಹೊರಬರುವುದು. ಇದೇ ಕಾರಣಕ್ಕಾಗಿ ಭಗವಂತನನ್ನು ‘ಶತರ್ಚಿ’ ಎಂದು ಕರೆಯುತ್ತಾರೆ.   

ಸ ಪ್ರಾಣಮಸೃಜತ ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋSನ್ನಮನ್ನಾದ್ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ

ಸೃಷ್ಟಿ ಪ್ರಾರಂಭದಲ್ಲಿ ಭಗವಂತ ತನ್ನೊಂದಿಗೆ ಸದಾ ಇರುವ ಒಬ್ಬ ಒಡನಾಡಿ ಬೇಕು ಎಂದು ಇಚ್ಛೆಪಟ್ಟು ಪ್ರಾಣದೇವರನ್ನು ಸೃಷ್ಟಿ ಮಾಡಿದ. ಪ್ರಪಂಚ ಸೃಷ್ಟಿಯಲ್ಲಿ ಪ್ರಾಣದಸೃಷ್ಟಿ ಎಂದರೆ ಜೀವಕಲೆಯ ಸೃಷ್ಟಿ. ಅಂದರೆ ಜೀವರುಗಳ ಸೃಷ್ಟಿ. ಈ ಸಮಸ್ತ ಜೀವರುಗಳಿಗೆ ಅಭಿಮಾನಿ ದೇವತೆ ಪ್ರಾಣದೇವರು.  ಷೋಡಶಕಲೆಗಳಲ್ಲಿ ‘ಜೀವ’ ಹದಿನಾರನೇ ಕಲೆ ಹಾಗೂ ಇದೊಂದೇ ಚೇತನ. ಇದಲ್ಲದೆ ಇನ್ನು ಹದಿನೈದು ಕಲೆಗಳು. ಅವುಗಳೆಂದರೆ: ಶ್ರದ್ಧೆ, ಖಂ, ವಾಯು, ಜ್ಯೋತಿ, ಆಪಃ, ಪ್ರಥಿವೀ, ಇಂದ್ರಿಯ, ಮನಃ, ಅನ್ನ, ವೀರ್ಯ, ತಪಃ, ಮಂತ್ರಾಃ, ಕರ್ಮ, ಲೋಕಾಃ ಮತ್ತು ಲೋಕೇಷು ನಾಮ.
ಮೊದಲು ಜೀವನಿಗೆ ಶ್ರದ್ಧೆಯನ್ನು ಸೃಷ್ಟಿಮಾಡಿದ. ಇದು ಮಾನಸಿಕ ಸ್ಥಿತಿ; ಜೀವದ ಅಂತರಂಗದ ಸ್ಥಿತಿ. ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿದೆ. ಅದು ಶ್ರದ್ಧೆ. ನಮ್ಮನಮ್ಮ ಶ್ರದ್ಧೆ ನಮನಮಗೆ. ನಾವು ಏನನ್ನು ನಂಬುತ್ತೆವೋ ಅದು ನಮಗೆ ಸತ್ಯ. ನಾವು ಏನನ್ನು ನಂಬುವುದಿಲ್ಲವೋ ಅದು ನಮ್ಮ ಪಾಲಿಗೆ ಇಲ್ಲಾ. ಆದ್ದರಿಂದ ಜೀವದ ಇಡಿಯ ಬೆಳವಣಿಗೆಗೆ ಮೂಲಭೂತವಾಗಿರತಕ್ಕಂತದ್ದು ‘ನಂಬಿಕೆ’. ನಂಬಿಕೆ ನಿಜವಾದರೆ ಏಳಿಗೆ. ಇಲ್ಲದಿದ್ದರೆ ಇಲ್ಲಾ! ಹಾಗಾಗಿ ನಮ್ಮ ಇಡೀ ಜೀವನದ ಏರಿಳಿತಗಳಿಗೆ ಮೂಲಭೂತವಾಗಿರುವುದು ನಮ್ಮ ನಂಬಿಕೆ. ಉದಾಹರಣೆಗೆ ಕೆಲವರು ದೇವರೇ ಇಲ್ಲಾ ಎಂದು ಗಟ್ಟಿಯಾಗಿ ನಂಬಿರುತ್ತಾರೆ. ಆಗ ಅವರು ಮೊಕ್ಷಮಾರ್ಗದಲ್ಲಿ ಸಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ‘ಶ್ರದ್ಧೆ’ ಹುಟ್ಟುವುದಕ್ಕೂ ಮೊದಲು ಇರುವ ಮೊಳಕೆ. ಆನಂತರ ಹುಟ್ಟಿದಮೇಲೆ ಆ ಮೊಳಕೆಯ ಮೇಲೆ ಅನುವಂಶೀಯ ಮತ್ತು ಪರಿಸರದ ಪ್ರಭಾವ ಇತ್ಯಾದಿ ನಂಬಿಕೆಗಳು ಮುಚ್ಚಳವಾಗಿ ಸೇರಿಕೊಳ್ಳುತ್ತವೆ.
‘ಜೀವ ಮತ್ತು ಅದಕ್ಕೊಂದು ನಂಬಿಕೆ’. ಇಂತಹ ಜೀವ ತಾಯಿಯ ಹೊಟ್ಟೆಯನ್ನು ಪ್ರವೇಶಿಸುತ್ತದೆ. ಅಲ್ಲಿ ಆ ಜೀವಕ್ಕೆ ಪಂಚಭೂತಗಳಿಂದ ಕೂಡಿದ ಶರೀರ ಬರುತ್ತದೆ. ಇಲ್ಲಿ ಖಂ ಅಂದರೆ ಆಕಾಶ, ವಾಯು ಅಂದರೆ ಗಾಳಿ, ಜ್ಯೋತಿ ಅಂದರೆ ಬೆಂಕಿ, ಆಪಃ ಎಂದರೆ ನೀರು. ಪ್ರಥಿವೀ ಎಂದರೆ ಮಣ್ಣು. ಹೀಗೆ ಮಣ್ಣು-ನೀರು-ಬೆಂಕಿ-ಗಾಳಿ-ಆಕಾಶ ಎನ್ನುವ ಐದು ಕಲೆಗಳು ಸೇರಿ ಶರೀರ ನಿರ್ಮಾಣವಾಗುತ್ತದೆ. ಇದನ್ನು ಅನ್ನಮಯಕೋಶ ಎನ್ನುತ್ತಾರೆ. ಪಂಚಭೂತಗಳಿಂದಾದ ಶರೀರ ಪ್ರಪಂಚದಲ್ಲಿರುವುದನ್ನು ಅನುಭವಿಸಲು ಇಂದ್ರಿಯಗಳು ಬೇಕು. ಪ್ರಪಂಚದಲ್ಲಿರುವ ರೂಪಗಳನ್ನು ನೋಡಲು ಕಣ್ಣು, ನಾದವನ್ನು ಕೇಳಲು ಕಿವಿ, ಸುಗಂಧ ಮೂಸಲು ಮೂಗು, ರುಚಿ ನೋಡಲು ನಾಲಿಗೆ, ಸ್ಪರ್ಶದ ಅನುಭವಕ್ಕೆ ತ್ವಗೀಂದ್ರಿಯ. ಹೀಗೆ ಪಂಚೇಂದ್ರಿಯಗಳ ಸೃಷ್ಟಿಯಾಯಿತು. ನಂತರ ಕುಸುರಿಕೆಲಸ ಶಿಲ್ಪಕಲೆ ಇತ್ಯಾದಿ ಕರ್ಮವನ್ನು ಮಾಡಲು ಕೈ, ಒಂದುಕಡೆಯಿಂದ ಇನ್ನೊಂದು ಕಡೆಗೆ ಹೋಗಿ ತನ್ನ ಅನುಭವವನ್ನು ವಿಸ್ತರಿಸಿಕೊಳ್ಳಲು ಕಾಲು, ನುಡಿಯಲು ಬಾಯಿ, ದೇಹಕ್ಕೆ ಬೇಡವಾದುದ್ದನ್ನು ಹೊರಹಾಕಲು ಪಾಯು ಮತ್ತು ಉಪಸ್ಥ; ಸೃಷ್ಟಿ ವಿಸ್ತಾರಕ್ಕೆ, ಸಂತಾನ ವೃದ್ಧಿಗೆ-ಜನನೇಂದ್ರಿಯ. ಹೀಗೆ ಪಂಚಕರ್ಮೇಂದ್ರಿಯದ ಸೃಷ್ಟಿಯಾಯಿತು.  ಆನಂತರ ಇಂದ್ರಿಯಾನುಭವವನ್ನು ಗ್ರಹಿಸಲು ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಎನ್ನುವ ಐದು ಅಂತಃಕರಣಗಳನ್ನೊಳಗೊಂಡ ಮನೋಮಯಕೋಶ ಸೃಷ್ಟಿಯಾಯಿತು. ಹೀಗೆ  ಶ್ರದ್ಧೆ, ಪಂಚಭೂತಗಳು, ಇಂದ್ರಿಯಗಳು(ಐದು ಜ್ಞಾನೇಂದ್ರಿಯ ಮತ್ತು ಐದು ಕರ್ಮೇಂದ್ರಿಯ) ಮತ್ತು  ಮನೋಮಯಕೋಶ ಎನ್ನುವ ಎಂಟು ಕಲೆಗಳಿಂದ ವ್ಯಕ್ತಿತ್ವದ ಪೂರ್ಣ ಬೆಳವಣಿಗೆಯಾಯಿತು. ಹೀಗೆ ರೂಪುಗೊಂಡ ದೇಹದ ಭೋಗಕ್ಕಾಗಿ ಜಡಪ್ರಪಂಚದ ಸೃಷ್ಟಿಯಾಯಿತು. ಜಡಪದಾರ್ಥವನ್ನು ಆಹಾರವಾಗಿ ಸೇವಿಸಿದಾಗ  ಅದರಿಂದ ದೇಹದಲ್ಲಿ ಶಕ್ತಿ ಬೆಳೆಯುತ್ತದೆ. ಅದರಿಂದ ಮುಂದಿನ ಸಂತಾನಕ್ಕೆ ಕಾರಣಭೂತವಾಗಿರುವ ವೀರ್ಯ ದೇಹದಲ್ಲಿ ನಿಷ್ಪನ್ನವಾಗುತ್ತದೆ. ಇದು ಸಂತಾನಕ್ಕೆ ಬೇಕಾದ ಹತ್ತನೇ ಕಲೆ.
ಜೀವ ದೇಹದಿಂದ ಬೆಳೆಯುವಾಗ ಜೀವನದ ನಡೆಯಲ್ಲಿ ಮೂರು ಕಲೆಗಳಿವೆ. ಅವುಗಳೆಂದರೆ ತಪಃ, ಮಂತ್ರ ಮತ್ತು ಕರ್ಮ. ಮನಸ್ಸಿನಲ್ಲಿ ತಾನು ಏನುಮಾಡಬೇಕು, ಏನಾಗಬೇಕು, ಇತ್ಯಾದಿ ಆಲೋಚನೆ ಮಾಡುವುದು ತಪಃ. ಹಾಗೆ ಯೋಚಿಸಿರುವುದನ್ನು ಇನ್ನೊಬ್ಬರೊಂದಿಗೆ ಮಂತ್ರಾಲೋಚನೆ ಮಾಡುವುದು ಮಂತ್ರ. ನಂತರ ತಾನು ಆಲೋಚಿಸಿರುವುದನ್ನು, ಹೇಳಿರುವುದನ್ನು ಮಾಡುವುದು ಕರ್ಮ. ಇವು ಬೆಳವಣಿಗೆಯಲ್ಲಿರುವ ಮೂರು ಕಲೆಗಳು. ಕರ್ಮವನ್ನು ಮಾಡುತ್ತಾ ನಾವು ಲೋಕವನ್ನು ಗಳಿಸುತ್ತೇವೆ. ಇಲ್ಲಿ ಲೋಕ ಅಂದರೆ ಸ್ಥಿರ-ಚರ ಸೊತ್ತುಗಳು. ಇನ್ನು ಹದಿನೈದನೇ ಕಲೆ ನಾಮ. ಇಲ್ಲಿ ನಾಮ ಅಂದರೆ ಹುಟ್ಟಿದಾಗ ಇಟ್ಟ ಹೆಸರು,  ಜೀವನದಲ್ಲಿ ಪಡೆದ ಕೀರ್ತಿ, ಅಪಕೀರ್ತಿ ಇತ್ಯಾದಿ.
ಒಟ್ಟಿನಲ್ಲಿ ಹೇಳಬೇಕೆಂದರೆ ಶ್ರದ್ಧೆ, ಪಂಚಭೂತಗಳು, ಇಂದ್ರಿಯಗಳು, ಮನೋಮಯಕೋಶ, ಆಹಾರ, ವೀರ್ಯ, ಆಲೋಚನೆ, ಮಾತು, ಕರ್ಮ, ಲೋಕ ಮತ್ತು ನಾಮ ಇವು ಜೀವದ ಮುಂದಿರುವ ಹದಿನೈದು ಬೇಲಿಗಳು. ಈ ಹದಿನೈದು ಬೇಲಿಗಳೊಳಗೆ ಸಿಕ್ಕಿಹಾಕಿಕೊಂಡಿರುವ ಜೀವ ಹದಿನಾರನೆ ಕಲೆ.
ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. ಅದೇನೆಂದರೆ: ಇಂದ್ರಿಯ, ಮನಸ್ಸು, ಇತ್ಯಾದಿ ನಮಗೆ ಬೇಲಿಯಾಗುವುದು ಹೇಗೆ ಎಂದು.  ಇಂದ್ರಿಯಗಳಿಂದ ಮನುಷ್ಯ ಜ್ಞಾನಗಳಿಸುತ್ತಾನೆ, ಎತ್ತರಕ್ಕೇರುತ್ತಾನೆ. ಮನಸ್ಸಿನಿಂದ ಉಚ್ಛ ವಿಚಾರಗಳನ್ನು ಚಿಂತನೆ ಮಾಡುತ್ತಾನೆ. ಹೀಗಿರುವಾಗ ಇದು ಬೇಲಿಯಾಗುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾವು ಸ್ವಲ್ಪ ಅಂತರಂಗದ ವಿಚಾರವನ್ನು ವಿಶ್ಲೇಷಿಸಬೇಕಾಗುತ್ತದೆ. ಉದಾಹರಣೆಗೆ ಕಣ್ಣು. ಕಣ್ಣಿನಿಂದ ನಾವು ನೋಡುತ್ತೇವೆ. ಆದರೆ ಈ ಕಣ್ಣು ನಮ್ಮ ಅಂತರಂಗವನ್ನು, ಸೂಕ್ಷ್ಮಪ್ರಪಂಚವನ್ನು ಗ್ರಹಿಸಲಾರದು. ಇದರಿಂದಾಗಿ ನಾವು ನಮ್ಮ ಒಳಗಣ್ಣನ್ನು ಮರೆತು ಹೊರಪ್ರಪಂಚದಲ್ಲೇ ಬದುಕಿಬಿಡುತ್ತೇವೆ. ಅದೇ ರೀತಿ ಮನಸ್ಸು. ಮನಸ್ಸು ನಮಗೆ ಸತ್ಯವನ್ನು ತಿಳಿಯದಂತೆ ನಮ್ಮನ್ನು ಹೊರಗೆಳೆದು ನಮ್ಮ ದಿಕ್ಕನ್ನು ಬದಲಿಸುತ್ತದೆ. ಎಲ್ಲವುದಕ್ಕೂ ಮೊದಲು ನಮ್ಮ ನಂಬಿಕೆ. ಒಂದು ವೇಳೆ ನಮ್ಮ ನಂಬಿಕೆ ತಪ್ಪಾಗಿದ್ದರೆ ನಮ್ಮ ಇಡೀ ಜೀವನವೇ ವ್ಯರ್ಥವಾಗುತ್ತದೆ. ಹೀಗೆ ಈ ಎಲ್ಲಾ ಹದಿನೈದು ಕಲೆಗಳೂ ಕೂಡಾ ಜೀವನನ್ನು ಬೇಲಿಯಂತೆ ಸುತ್ತುವರಿದಿರುತ್ತವೆ.

Saturday, December 1, 2012

Prashnopanishad in Kannada-Prashna-VI (01-02)


ಷಷ್ಠಃ ಪ್ರಶ್ನಃ


ಅಥ ಹೈನಂ ಸುಕೇಶಾ ಭಾರದ್ವಾಜಃ ಪಪ್ರಚ್ಛ ಭಗವನ್ ಹಿರಣ್ಯನಾಭಃ ಕೌಸಲ್ಯೋ ರಾಜಪುತ್ರೋ ಮಾಮುಪೇತ್ಯೈತಂ ಪ್ರಶ್ನಮಪೃಚ್ಛತ ಷೋಡಶಕಲಂ ಭಾರದ್ವಾಜ ಪುರುಷಂ ವೇತ್ಥ   ತಮಹಂ ಕುಮಾರಂಬ್ರುವಂ ನಾಹಮಿಮಂ ವೇದ  ಯಧ್ಯಹಮಿಮಮವೇದಿಷ್ಯಂ ಕಥಂ ತೇ ನಾವಕ್ಷ್ಯಮಿತಿ   ಸಮೂಲೋ ವಾ ಏಷ ಪರಿಶುಷ್ಯತಿ ಯೋSನೃತಮಭಿವದತಿ ತಸ್ಮಾನ್ನಾರ್ಹಮ್ಯನೃತಂ ವಕ್ತುಂ ಸ ತೂಷ್ಣೀಂ ರಥಮಾರುಹ್ಯ ಪ್ರವವ್ರಾಜ ತಂ ತ್ವಾ ಪೃಚ್ಛಾಮಿ ಕ್ವಾಸೌಪುರುಷ ಇತಿ

ಆರು ಜನ ಋಷಿಗಳಲ್ಲಿ ಶ್ರೇಷ್ಠರಾದ ಸುಕೇಶಾ ಭಾರದ್ವಾಜರು ತಮ್ಮ ಪ್ರಶ್ನೆಯನ್ನು ಕೇಳುವುದರೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ. ಅವರು ತಮ್ಮ ಪ್ರಶ್ನೆಯ ಮಹತ್ವವನ್ನು ವಿವರಿಸುವುದಕ್ಕೊಸ್ಕರ, ತಮ್ಮ ಪ್ರಶ್ನೆಗೆ ಸಂಬಂಧಿಸಿದ, ಅವರ ಜೀವನದಲ್ಲಿ  ನಡೆದ ಒಂದು ಘಟನೆಯನ್ನು ಮೊದಲು ವಿವರಿಸುತ್ತಾರೆ. ಅವರು ಹೇಳುತ್ತಾರೆ: “ನಾನು ಇಲ್ಲಿ ಕೇಳುವ ಪ್ರಶ್ನೆ ನನ್ನಲ್ಲಿ ಹಿಂದೆ ಒಬ್ಬರು ಕೇಳಿದ ಪ್ರಶ್ನೆ” ಎಂದು. ಒಮ್ಮೆ ಕೋಸಲ ದೇಶದ ರಾಜಕುಮಾರ ‘ಹಿರಣ್ಯನಾಭ’ ನನ್ನ ಬಳಿ ಬಂದು ನನ್ನಲ್ಲಿ ಈ ರೀತಿ ಪ್ರಶ್ನೆ ಹಾಕಿದ: “ಹದಿನಾರು ಕಲೆಯ ಒಡೆಯನಾದ ಒಬ್ಬ ಪರಮಪುರುಷನ ಉಪಾಸನೆ ಹೇಗೆ ಮಾಡಬೇಕು” ಎಂದು. ನಾವು ಪುರುಷಸೂಕ್ತವನ್ನು ನೋಡಿದಾಗ ಅಲ್ಲಿ “ಸಹಸ್ರಶೀರ್ಷಾ ಪುರುಷಃ” ಎಂದು ನಾರಾಯಣನನ್ನು ಸ್ತುತಿಸಿರುವುದನ್ನು ಕಾಣುತ್ತೇವೆ. ಆದ್ದರಿಂದ ಪುರುಷಃ ಎಂದರೆ ನಾರಾಯಣ. ಆದರೆ ಹದಿನಾರು ಕಲೆಗಳು ಯಾವುದು? ಅವುಗಳನ್ನು ನಿಯಂತ್ರಿಸುವ ಭಗವಂತನನ್ನು ಎಲ್ಲಿ ಹೇಗೆ ಉಪಾಸನೆ ಮಾಡಬೇಕು ಎನ್ನುವುದು ಇಲ್ಲಿರುವ ಪ್ರಶ್ನೆ. “ಈ ಪ್ರಶ್ನೆಗೆ ಉತ್ತರ ನನಗೆ ತಿಳಿಯದು” ಎಂದು  ಸುಕೇಶಾ ಭಾರದ್ವಾಜರು ಹೇಳಿದಾಗ, ಹಿರಣ್ಯನಾಭ ಪುನಃ  “ನಿಮಗೆ ಖಂಡಿತವಾಗಿ ತಿಳಿದಿದೆ. ಅದನ್ನು ನನಗೆ ಹೇಳಿ” ಎಂದು ಒತ್ತಾಯಿಸುತ್ತಾನೆ.[ಇಲ್ಲಿ ಅಬ್ರವಂ ಎನ್ನುವ ಪದವನ್ನು ‘ಅಬ್ರುವಮ್’ ಎಂದು ಬಳಸಿದ್ದಾರೆ. ಇದು ತಾತ್ಪರ್ಯಪೂರ್ವಕ ಅಥವಾ ಒತ್ತುಕೊಟ್ಟು ಹೇಳುವುದನ್ನು ಸೂಚಿಸುತ್ತದೆ. ಉದಾಹರಣೆಗೆ: ಬಹಳàಬಹಾಳ]   ಆಗ ಸುಕೇಶಾ ಭಾರದ್ವಾಜರು ಹೇಳುತ್ತಾರೆ. “ನನಗೆ ಈ ಜ್ಞಾನ ತಿಳಿದಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ. ಯಾರು ಸುಳ್ಳುಹೇಳುತ್ತಾನೋ ಅವನ ಬದುಕು ಬೇರುಸಹಿತ ಒಣಗಿದ ಮರದಂತೆ ವ್ಯರ್ಥ ಎನ್ನುವುದು ನನಗೆ ತಿಳಿದಿದೆ. ಆದ್ದರಿಂದ ನನಗೆ ತಿಳಿಯದ್ದನ್ನು ನಿನಗೆ ಹೇಗೆ ಹೇಳಲಿ” ಎಂದು. ಇಲ್ಲಿ ‘ಅಭಿವದತಿ’ ಎನ್ನುವ ಪದ ಬಳಕೆಯಾಗಿದೆ. ಅಬಿವದತಿ ಅಂದರೆ ಒಳಗಿನಿಂದ ಮತ್ತು ಹೊರಗಿನಿಂದ ಸುಳ್ಳು ಹೇಳುವುದು. ಮೋಸಮಾಡಬೇಕೆನ್ನುವ ಉದ್ದೇಶದಿಂದ ಹೇಳುವ ಸುಳ್ಳ-ಅಭಿವದತಿ. ಇನ್ನೊಬ್ಬರ ಶ್ರೇಯಸ್ಸಿಗಾಗಿ ಹೇಳುವ ಸುಳ್ಳು ಸುಳ್ಳಲ್ಲ.   ಇಲ್ಲಿ ಸುಕೇಶಾ ಭಾರದ್ವಾಜರು ಮುಂದುವರಿದು: “ನಾನು ಅಪ್ರಾಮಾಣಿಕತೆಯಿಂದ ಸುಳ್ಳು ಹೇಳಿದರೆ, ನನ್ನ ಎಲ್ಲಾ ಪುಣ್ಯಗಳು ನಾಶವಾಗಿ, ನಾನು ನಿರ್ನಾಮವಾಗಿ ಹೋಗುತ್ತೇನೆ. ಸುಳ್ಳು ಹೇಳುವುದರಿಂದ ಇಡೀ ಮನುಷ್ಯನ ವ್ಯಕ್ತಿತ್ವ ನಾಶವಾಗಿ ಹೋಗುತ್ತದೆ. ಅವನು ಮಾಡಿದ ಪುಣ್ಯಕರ್ಮಗಳು ಕರಗಿ ಹೋಗುತ್ತವೆ. ಹೀಗಾಗಿ ಸುಳ್ಳು ಹೇಳುವುದರ ಅಪಾಯದ ಅರಿವು ನನಗಿದೆ. ಪ್ರಾಮಾಣಿಕವಾಗಿ ನನಗೆ ನಿನ್ನ ಪ್ರಶ್ನೆಗೆ ಉತ್ತರ ತಿಳಿದಿಲ್ಲ” ಎನ್ನುತ್ತಾರೆ. ಸುಕೇಶಾ ಭಾರದ್ವಾಜರು ಈ ರೀತಿ ನುಡಿದಾಗ ಹಿರಣ್ಯನಾಭ ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲವಲ್ಲಾ ಎಂದು ಬೇಸರದಿಂದ ತನ್ನ ವಾಹನವನ್ನು ಏರಿ  ಅಲ್ಲಿಂದ ಹೊರಟುಹೋಗುತ್ತಾನೆ.
“ಆ ರಾಜಕುಮಾರ ಕೇಳಿರುವ ಪ್ರಶ್ನೆಗೆ ಉತ್ತರ ನಿಮಗೆ ತಿಳಿದಿದೆ.  ಆದ್ದರಿಂದ ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಆ  ಷೋಡಶ ಕಲೆಗಳು ಯಾವುದು?  ಷೋಡಶ ಕಲೆಗಳಿಗೂ ಭಗವಂತನಿಗೂ ಯಾವ ಸಂಬಂಧ? ಷೋಡಶಕಲಾ ಪುರುಷನನ್ನು ಎಲ್ಲಿ ಹೇಗೆ ಉಪಾಸನೆ ಮಾಡಬೇಕು?” ಇದು ಈ ಉಪನಿಷತ್ತಿನಲ್ಲಿರುವ ಆರನೆಯ ಮತ್ತು ಕೊನೇಯ ಪ್ರಶ್ನೆ. ಬನ್ನಿ, ಆರುಮಂದಿ ಋಷಿಗಳೊಂದಿಗೆ ಸೇರಿ, ನಾವೂ ಈ ಪ್ರಶ್ನೆಗೆ ಉತ್ತರ ರೂಪವಾಗಿರುವ ಅತ್ಯದ್ಭುತ ಜ್ಞಾನ ಸಂದೇಶವನ್ನು ಭಗವಂತನ ಕೃಪೆಬೇಡಿ, ಪಿಪ್ಪಲಾದರಿಂದ  ಕೇಳಿ ತಿಳಿದು ಧನ್ಯರಾಗೋಣ.   

ತಸ್ಮೈ ಸ ಹೋವಾಚ   ಇಹೈವಾಂತಃ ಶರೀರೇ ಸೋಮ್ಯ ಸ ಪುರುಷೇ ಯಸ್ಮಿನ್ನೇತಾಃ ಷೋಡಶಕಲಾಃ ಪ್ರಭವಂತೀತಿ

ಒಬ್ಬ ಸಾಧಕ ತಿಳಿಯಲೇಬೇಕಾಗಿರುವ ಅತ್ಯುತ್ತಮ ಪ್ರಶ್ನೆ ಇದಾಗಿರುವುದರಿಂದ, ಪಿಪ್ಪಲಾದರಿಗೆ ಬಹಳ ಸಂತೋಷವಾಯಿತು[ಹ-ಕಾರ ಇದನ್ನು ಸೂಚಿಸುತ್ತದೆ]. ಅವರು ಹೇಳುತ್ತಾರೆ: ಭಗವಂತನನ್ನು ನಾವು ನಮ್ಮ ದೇಹದೊಳಗೇ ಕಂಡು ಉಪಾಸನೆ ಮಾಡಬೇಕೇ ಹೊರತು, ಆತನನ್ನು ಎಲ್ಲೆಲ್ಲೋ ಹುಡುಕುವುದಲ್ಲ” ಎಂದು. ಇಲ್ಲಿ ಪಿಪ್ಪಲಾದರು ಸುಕೇಶಾ ಭಾರದ್ವಾಜರನ್ನು ‘ಸೋಮ್ಯ’ ಎಂದು ಸಂಬೋಧಿಸಿದ್ದಾರೆ. ಸೋಮ+ಇವ=ಸೋಮ್ಯ. ಅಂದರೆ ಚಂದ್ರನಂತೆ ತುಂಬಾ ತಂಪಾದ ಸ್ವಭಾವ ಉಳ್ಳವನು, ಯಾರ ಮನಸ್ಸಿಗೂ ನೋವಾಗದಂತೆ ಪ್ರೀತಿಯಿಂದ ಮಾತನಾಡುವವನು, ಮೃದು ಸ್ವಭಾವದವನು ಎಂದರ್ಥ. ಒಬ್ಬ ಶಾಸ್ತ್ರಜ್ಞ ಎಷ್ಟು ಸೌಮ್ಯನಾಗಿರಬೇಕೆಂದರೆ:  ಆತ ಯಾರನ್ನೂ ದ್ವೇಷ ಮಾಡುವಂತಿಲ್ಲ, ಇನ್ನೊಬ್ಬರನ್ನು ಅವಮಾನಗೊಳಿಸುವ ಕೆಟ್ಟ ಮಾತನ್ನಾಡುವಂತಿಲ್ಲ. ಇದು ಶಾಸ್ತ್ರದ ನಿಯಮ. “ಇದನ್ನೇ ವಿದ್ಯಾ ದದಾತಿ  ವಿನಯಮ್” ಎನ್ನುತ್ತಾರೆ. ಇದು ಅಧ್ಯಾತ್ಮದ ಮಾರ್ಗದಲ್ಲಿ ಮೊದಲು ಗಳಿಸಬೇಕಾದಂತಹ ಅರ್ಹತೆ. ‘ಸೋಮ್ಯ’ ಎಂದರೆ ಸೋಮಯಾಗ ಮುಂತಾದಂತಹ ವೇದೋಕ್ತವಾದ ಕರ್ಮಾನುಷ್ಠಾನ ಮಾಡುತ್ತಾ, ಕರ್ಮದಲ್ಲಿ ಪರಿಣತಿ ಪಡೆದವ ಎನ್ನುವುದು ಇನ್ನೊಂದು ಅರ್ಥ.
ಎಲ್ಲರ ಒಳಗೂ ಅಂತರ್ಯಾಮಿಯಾಗಿರುವ ಭಗವಂತ ‘ಪುರುಷಃ’. ನಮ್ಮ ಹೃತ್ಕಮಲ ಮಧ್ಯದಲ್ಲಿರುವ ಬಿಂಬರೂಪಿ ಪರಮಪುರುಷನನ್ನು, ಅಂತಃದೃಷ್ಟಿಯಿಂದ ಕಂಡು ಮಾಡುವ  ಉಪಾಸನೆಯೇ ಷೋಡಶಕಲಾ ಉಪಾಸನೆ. ಹದಿನಾರು ಕಲೆಗಳು ಭಗವಂತನ ಆಶ್ರಯದಿಂದ ಈ ಪ್ರಪಂಚವಾಗಿ ರೂಪುಗೊಂಡು, ತಮ್ಮತಮ್ಮ ಕಾರ್ಯನಿರ್ವಹಣೆ ಮಾಡುತ್ತವೆ.