ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Saturday, September 1, 2012

Prashnopanishad in Kannada-Prashna-I (12-16)


ಮಾಸೋ ವೈ ಪ್ರಜಾಪತಿಸ್ತಸ್ಯ ಕೃಷ್ಣಪಕ್ಷ ಏವ ರಯಿಃ ಶುಕ್ಲಃ ಪ್ರಾಣಸ್ತಸ್ಮಾದೇತ ಋಷಯಃ ಶುಕ್ಲ ಇಷ್ಟಂ ಕುರ್ವಂತೀತರ
ಇತರಸ್ಮಿನ್   ೧೨

ಮುಂದುವರಿದು ಪಿಪ್ಪಲಾದರು ಹೇಳುತ್ತಾರೆ: “ಭಗವಂತ ಮಾಸದಲ್ಲಿ ತುಂಬಿದ, ಅದರಲ್ಲಿ ಕೃಷ್ಣಪಕ್ಷದಲ್ಲಿ ಭಾರತಿ ಹಾಗೂ ಶುಕ್ಲಪಕ್ಷದಲ್ಲಿ ಪ್ರಾಣದೇವರು ತುಂಬಿದರು” ಎಂದು.  ಶುಕ್ಲಪಕ್ಷದಲ್ಲಿ ಪ್ರಾಣಶಕ್ತಿಯ ಪ್ರಭಾವ ಹೆಚ್ಚು. ಹೀಗಾಗಿ  ಪ್ರಾಣತತ್ವಕ್ಕೆ ಪ್ರಿಯವಾದಂತಹ ಕೆಲಸವನ್ನು ಮಾಡುವಾಗ ಶುಕ್ಲಪಕ್ಷದಲ್ಲಿ ಮಾಡಬೇಕು ಮತ್ತು ಐಹಿಕ ಹಾಗೂ ಸಾಂಸಾರಿಕವಾದ ಯಾವುದೇ ಕ್ರಿಯೆಯನ್ನು ಕೃಷ್ಣಪಕ್ಷದಲ್ಲಿ ಮಾಡಬೇಕು ಎನ್ನುತ್ತಾರೆ. ಹಿಂದಿನ ಕಾಲದಲ್ಲಿ ಋಷಿಗಳು ಯಾವುದೇ ಯಜ್ಞ ಮಾಡುವುದಿದ್ದರೂ ಅದನ್ನು ಶುಕ್ಲಪಕ್ಷದಲ್ಲಿ ಮಾಡುತ್ತಿದ್ದರು. ಯಜ್ಞ ಅನ್ನುವುದು ಭಗವಂತನ ಆರಾಧನೆ. ನಾವು ಮಾಡುವ ಕರ್ಮವನ್ನು ಭಗವಂತನಿಗೆ ಅರ್ಪಿಸುವವರು ಪ್ರಾಣದೇವರು. ಆದ್ದರಿಂದ ಶುಕ್ಲಪಕ್ಷದಲ್ಲಿ ಮಾಡಿದ  ಕರ್ಮ ನೇರವಾಗಿ ಪ್ರಾಣದೇವರ ಮುಖೇನ ಭಗವಂತನನ್ನು ಸೇರುತ್ತದೆ.

ಅಹೋರಾತ್ರೇ ವೈ ಪ್ರಜಾಪತಿಸ್ತಸ್ಯಾಹರೇವ ಪ್ರಾಣೋ ರಾತ್ರಿರೇವ ರಯಿಃ ಪ್ರಾಣಂ ವಾ ಏತೇ ಪ್ರಸ್ಕಂದಂತಿ ಯೇ ದಿವಾ ರತ್ಯಾ ಸಂಯುಜ್ಯಂತೇ ಬ್ರಹ್ಮಚರ್ಯಮೇವ ತದ್ಯದ್ರಾತ್ರೌ ರತ್ಯಾ ಸಂಯುಜ್ಯಂತೇ   ೧೩

ಮಾಸದಲ್ಲಿ ತುಂಬಿದ ಭಗವಂತ ದಿನದ ಅಹೋರಾತ್ರಿಗಳಲ್ಲಿ ತುಂಬಿದ. ಅದರಲ್ಲಿ ಹಗಲಿನಲ್ಲಿ ಪ್ರಾಣ ಮತ್ತು ರಾತ್ರಿಯಲ್ಲಿ ಭಾರತಿ ತುಂಬಿದರು. ಹೀಗಾಗಿ ಯಾವುದೇ ಪುಣ್ಯಕರ್ಮ ಮಾಡುವುದಿದ್ದರೂ ಅದನ್ನು ಹಗಲಿನಲ್ಲಿ ಮಾಡುತ್ತಾರೆ. ಅಗ್ನಿಯಲ್ಲಿ ಅರ್ಪಿಸಿದ ಹವಿಸ್ಸು ಅಗ್ನಿಯ ಏಳು ಬಣ್ಣಗಳ ಮುಖೇನ ಸೂರ್ಯನ ಏಳು ಬಣ್ಣಗಳಲ್ಲಿ ವಿಲೀನಗೊಂಡು ಅಲ್ಲಿ ಶಕ್ತಿಪಾತವಾಗಿ ವಾತಾವರಣ ಶುದ್ಧಿಯಾಗುತ್ತದೆ.
ಹಗಲಿನಲ್ಲಿ ಪ್ರಾಣದೇವರು ಮತ್ತು ರಾತ್ರಿಯಲ್ಲಿ ಭಾರತಿ ತುಂಬಿರುವುದರಿಂದ ಪ್ರಾಣ-ಭಾರತಿಯರ ಸಮಾಗಮ ರಾತ್ರಿಯಲ್ಲಿ. ಹೀಗಾಗಿ ಸಂತಾನ ಬಯಸುವ ಸ್ತ್ರೀ-ಪುರುಷರು ರಾತ್ರಿಯಲ್ಲೇ ಸಮಾಗಮವಾಗಬೇಕು. ಹಗಲಿನಲ್ಲಿ ಸ್ತ್ರೀ-ಪುರುಷರ ಸಮಾಗಮವಾದರೆ ಅಲ್ಲಿ ಪ್ರಾಣಶಕ್ತಿ ವ್ಯರ್ಥವಾಗುತ್ತದೆ. ಹಗಲಿನಲ್ಲಿ ನಡೆಯುವ ಸ್ತ್ರೀ-ಪುರುಷ ಸಮಾಗಮ ಭಗವಂತನ ಚಿತ್ತಕ್ಕೆ ಬಾರದ ಸಮಾಗಮ. ಇದರಿಂದ ವ್ಯಕ್ತಿ ಪ್ರಾಣಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಮತ್ತು ಆತ ತ್ರಾಣ ಕಳೆದುಕೊಂಡು ದುರ್ಬಲನಾಗುತ್ತಾನೆ

ಅನ್ನಂ ವೈ ಪ್ರಜಾಪತಿಸ್ತತೋ ಹ ವೈ ತದ್ರೇತಸ್ತಸ್ಮಾದಿಮಾಃ ಪ್ರಜಾಃಪ್ರಜಾಯಂತ ಇತಿ   ೧೪

ನಾವು ಸೇವಿಸುವ ಅನ್ನದಲ್ಲಿ ಭಗವಂತ ನೆಲೆಸಿದ. ಆ ಆಹಾರದಲ್ಲಿರುವ ಜೀವಾಣುವಿನಲ್ಲಿ ಪ್ರಾಣ ದೇವರು ಸೇರಿ ಅದು ಗಂಡಿನ ದೇಹದಲ್ಲಿ ರೇತಸ್ಸಾಗಿ ಪರಿಣಾಮಹೊಂದುವಂತೆ ಮಾಡುತ್ತಾರೆ. ಅದೇ ರೀತಿ ಹೆಣ್ಣಿನ ಆಹಾರ  ಆಕೆಯ ದೇಹದಲ್ಲಿ ಶೋಣಿತವಾಗಿ ಪರಿಣಾಮ ಹೊಂದುವಂತೆ ಭಾರತಿ ಮಾಡುತ್ತಾಳೆ. ಈ ಶುಕ್ಲ-ಶೋಣಿತಗಳ ಸಮಾಗಮದಿಂದ ಸಂತಾನವಾಗುತ್ತದೆ.  ಹೀಗೆ ಭಗವಂತನಿಂದ, ಪ್ರಾಣ-ಭಾರತಿಯಿಂದ, ಸ್ತ್ರೀ-ಪುರುಷರ ಸಮಾಗಮದಿಂದ, ಕಾಲಕ್ರಮದಲ್ಲಿ(ಸೂರ್ಯ)  ಸೃಷ್ಟಿ ಮುಂದುವರಿಯುತ್ತದೆ. ಎಲ್ಲವುದಕ್ಕೂ ಮೂಲಕಾರಣವಾಗಿ ಲಕ್ಷ್ಮೀ-ನಾರಾಯಣರು ನಿಂತು ನಿಯಮಿಸುತ್ತಾರೆ.

ಸೃಷ್ಟಿಯ ಬಗ್ಗೆ ವಿಶಿಷ್ಟವಾದ ವಿವರವನ್ನು ನೀಡಿದ ಪಿಪ್ಪಲಾದರು ಮುಂದೆ ಭಗವದ್ ತತ್ವದ ಉಪಾಸನೆಯ ಒಂದು ವಿಶಿಷ್ಠ ವಿಚಾರವನ್ನು ಹೇಳುತ್ತಾರೆ.

ತದ್ಯೇ ಹ ವೈ ತತ್ ಪ್ರಜಾಪತಿವ್ರತಂ ಚರಂತಿ ತೇ ಮಿಥುನಮುತ್ಪಾದಯಂತೇ ತೇಷಾಮೇವೈಷ ಬ್ರಹ್ಮಲೋಕೋ ಯೇಷಾಂ ತಪೋ ಬ್ರಹ್ಮಚರ್ಯಂ ಯೇಷು ಸತ್ಯಂ ಪ್ರತಿಷ್ಟಿತಮ್   ೧೫

ಪಿಪ್ಪಲಾದರು ಹೇಳುತ್ತಾರೆ: ಯಾರಾದರು ಶ್ರದ್ಧೆಯಿಂದ ‘ಪ್ರಜಾಪತಿ ವ್ರತ’ವನ್ನು ಆಚರಿಸಿದರೆ ಒಳ್ಳೆಯ ಮಕ್ಕಳ ತಂದೆ-ತಾಯಿಯರಾಗುತ್ತಾರೆ” ಎಂದು.  ಇಲ್ಲಿ ಹೇಳಿರುವ ‘ಪ್ರಜಾಪತಿ ವ್ರತ’ವನ್ನು ಋಕ್ ವಿಧಾನದಲ್ಲಿ ವಿವರಿಸಿದ್ದಾರೆ. ಇದು ಪುರುಷಸೂಕ್ತದಲ್ಲಿ ಮಾಡುವ ಭಗವಂತನ ಉಪಾಸನೆ. ಪ್ರತೀ ತಿಂಗಳು ಶುಕ್ಲಪಕ್ಷದಲ್ಲಿ ಪುರುಷಸೂಕ್ತ ಹೋಮ- ಒಂದು ವರ್ಷ ಮಾಡಿದರೆ ಅದು ಪ್ರಜಾಪತಿವ್ರತವೆನಿಸುತ್ತದೆ. ಏಕಾದಶಿ ದಿನದಂದು ಪುರುಷಸೂಕ್ತದ ಹದಿನಾರು ಮಂತ್ರಗಳಿಂದ ಷೋಡಶೋಪಚಾರ[ಆಸನ, ಸ್ವಾಗತ, ಪಾದ್ಯ(ಕಾಲು ತೊಳೆಯುವ ನೀರು), ಅರ್ಘ್ಯ(ಕೈ ತೊಳೆಯುವ ನೀರು), ಆಚಮನ, ಮಧುಪರ್ಕ, ಪುನರಾಚಮನ, ಸ್ನಾನ, ವಸ್ತ್ರ, ಆಭರಣ, ಗಂಧ, ಪುಷ್ಪ, ಧೂಪ, ನೈವೇದ್ಯ, ನೀರಾಜನ ಅಥವಾ ಪ್ರದಕ್ಷಿಣನಮಸ್ಕಾರ]ಪೂಜೆ ಮಾಡಿ, ಪೂರ್ಣ ಉಪವಾಸವಿರಬೇಕು. ಮರುದಿನ(ದ್ವಾದಶಿ) ಆಹುತಿ ಕೊಡಲು ಅಕ್ಕಿಯನ್ನು ಹಾಲಿನಲ್ಲಿ ಬೇಯಿಸಬೇಕು(ಚರು). ಬೇಯಿಸುವಾಗ ಅದನ್ನು ಪುರುಷಸೂಕ್ತದಿಂದ ಅಭಿಮಂತ್ರ ಮಾಡಬೇಕು. ತದನಂತರ ಅಗ್ನಿಪ್ರತಿಷ್ಠೆ ಮಾಡಿ ಹೋಮ ಮಾಡಬೇಕು. ಇಲ್ಲಿ ಮೊದಲು ಹದಿನಾರು ಮಂತ್ರಗಳಿಂದ ಷೋಡಶಸಂಸ್ಕಾರ ಮಾಡಬೇಕು. ಆನಂತರ ಪುರುಷ ಸೂಕ್ತವನ್ನು ಹೇಳಿಕೊಂಡು ಅಗ್ನಿ ದೇವತೆಯಲ್ಲಿ ಸನ್ನಿಹಿತನಾದ ಭಗವಂತನನ್ನು ಸ್ತೋತ್ರ ಮಾಡಬೇಕು. ಹನ್ನೆರಡು ತಿಂಗಳಿಗೆ ಭಗವಂತನ ಹನ್ನೆರಡು ರೂಪಗಳು. [ಮಾರ್ಗಶಿರ-ಕೇಶವ, ಪುಷ್ಯ-ನಾರಾಯಣ,   ಮಾಘ-ಮಾಧವ, ಫಾಲ್ಗುಣ-ಗೋವಿಂದ, ಚೈತ್ರ-ವಿಷ್ಣು, ವೈಶಾಖ-ಮಧುಸೂದನ, ಜ್ಯೇಷ್ಠ -ತ್ರಿವಿಕ್ರಮ, ಆಷಾಢ-ವಾಮನ, ಶ್ರಾವಣ -ಶ್ರೀಧರ, ಭಾದ್ರಪದ-ಹೃಷಿಕೇಶ, ಆಶ್ವೀಜ-ಪದ್ಮನಾಭ, ಕಾರ್ತ್ತಿಕ- ದಾಮೋದರ] ಆಯಾ ತಿಂಗಳ ದ್ವಾದಶಿಯಲ್ಲಿ ಆಯಾ ತಿಂಗಳ ಭಗವಂತನ ವಿಶಿಷ್ಠರೂಪಕ್ಕೆ ಆಹುತಿ. ನಂತರ ಹದಿನಾರು ತುಪ್ಪದ ಆಹುತಿ. ನಂತರ ಹಾಲಿನಲ್ಲಿ ಬೇಯಿಸಿದ ಅನ್ನದ ಹದಿನಾರು ಆಹುತಿ. ಕೊನೆಯಲ್ಲಿ ಪುನಃ ಪುರುಷಸೂಕ್ತದ ಹದಿನಾರು ಮಂತ್ರಗಳಿಂದ ಹದಿನಾರು ಬಾರಿ ತುಪ್ಪದ ಆಹುತಿ. ಹೀಗೆ ಪ್ರತೀ ಶುಕ್ಲಪಕ್ಷದ ಏಕಾದಶಿಯಂದು ಉಪವಾಸವಿದ್ದು ದ್ವಾದಶಿ ದಿನ ಭಗವಂತನ ಪೂಜೆ. ಇನ್ನು ಸಾಧ್ಯವಾದರೆ ದ್ವಾದಶಿಯಂದು ಹದಿನಾರು ಮಂದಿ ಯೋಗ್ಯ ಮಂದಿಗೆ ಭೋಜನ ಹಾಕುವುದು. ಕೊನೆಯಲ್ಲಿ ಆಹುತಿ ಕೊಟ್ಟ ಅನ್ನದ ಶೇಷ ಭಾಗವನ್ನು ಹೆಂಡತಿ “ತನ್ನ ಗಂಡನಲ್ಲಿ ನಾರಾಯಣನಿದ್ದಾನೆ’ ಎಂದು ತಿಳಿದು, ಆತನಿಗೆ ಭಕ್ತಿಪೂರ್ವಕ ನಮಸ್ಕಾರ ಮಾಡಿ ಸೇವಿಸಬೇಕು.   ನಮ್ಮೊಳಗೆ ಲಕ್ಷ್ಮೀ ನಾರಾಯಣರಿದ್ದಾರೆ ಎನ್ನುವ ಅನುಸಂಧಾನದಿಂದ ಪುರುಷಸೂಕ್ತ ಹೇಳಿ ದಂಪತಿಗಳು ಊಟ ಮಾಡಬೇಕು. ಈ ವ್ರತವನ್ನು ಹನ್ನೆರಡು ತಿಂಗಳು ಪೂರ್ಣ ಭಕ್ತಿ  ಮತ್ತು ನಂಬಿಕೆಯಿಂದ ಮಾಡಿದರೆ ಆಗ ದಂಪತಿಗಳಿಗೆ ಉತ್ತಮ ಸಂತಾನವಾಗುತ್ತದೆ.
ಈ ವ್ರತ ಮಾಡುವುದರಿಂದ ಮಕ್ಕಳೇ ಇಲ್ಲದವರಿಗೆ ಮಕ್ಕಳಾಗುತ್ತಾರೆ, ಗಂಡು ಮಗು ಇಲ್ಲದವರಿಗೆ ಗಂಡು ಮಗುವಾಗುತ್ತದೆ, ಮಕ್ಕಳು ಹುಟ್ಟಿ ಸಾಯುವ ಪ್ರಸಂಗ ಇದ್ದರೆ ಅದು ನಿಲ್ಲುತ್ತದೆ. ಇದನ್ನು ಋಷ್ಯಶೃಂಗ ಮುನಿಗಳು ಹೇಳಿದರು ಎನ್ನುತ್ತಾರೆ.

 ಆಳವಾದ ಶಾಸ್ತ್ರದ  ಅನುಸಂಧಾನದಿಂದ, ಬ್ರಹ್ಮಚರ್ಯಪಾಲನೆಯಿಂದ[ಸ್ತ್ರೀಸಂಗ ತೊರೆಯುವುದು, ವೇದಾಧ್ಯಯನ, ನಿರಂತರ ಭಗವಂತನ ಚಿಂತನೆ] ಪುರುಷಸೂಕ್ತ ಹೋಮ ಮಾಡಿದರೆ ಸತ್ಯಲೋಕ ಪ್ರಾಪ್ತಿಯಾಗುತ್ತದೆ. ಇಲ್ಲಿ ಮಾಡುವ ಕರ್ಮದ ಹಿಂದೆ ಸತ್ಯ ಶಬ್ದವಾಚ್ಯ ಭಗವಂತನ ಅನುಸಂಧಾನ ಬಹಳ ಮುಖ್ಯ.  

ತೇಷಾಮಸೌ ವಿರಜೋ ಬ್ರಹ್ಮಲೋಕೋ ನ ಯೇಷು ಜಿಹ್ಮಮನೃತಂ ನ ಮಾಯಾ ಚೇತಿ   ೧೬

ಮುಂದುವರಿದು ಪಿಪ್ಪಲಾದರು ಹೇಳುತ್ತಾರೆ:  ಕೇವಲ ಸತ್ಯಲೋಕವಷ್ಟೇ ಅಲ್ಲ, ರಜೋಗುಣದ ಸ್ಪರ್ಶವೇ ಇಲ್ಲದ ವಿಷ್ಣುಲೋಕ ವೈಕುಂಠವನ್ನು ಸೇರಬಹುದು ಎಂದು. ಇಲ್ಲಿ ತಪಸ್ಸು, ಬ್ರಹ್ಮಚರ್ಯ, ಪುರುಷ ಸೂಕ್ತದಿಂದ ಅನುಷ್ಠಾನ, ಎಲ್ಲಾ ಕರ್ಮಗಳಲ್ಲೂ ಭಗವಂತನ ಅನುಸಂಧಾನ, ಜೊತೆಗೆ ಪ್ರಾಮಾಣಿಕತೆ, ಡಂಬಾಚಾರ ಇಲ್ಲದ,  ಮಾಯ ಅಲ್ಲದ, ಸ್ವಚ್ಛ, ಪ್ರಾಮಾಣಿಕ  ಭಕ್ತಿ ಅತ್ಯಗತ್ಯ.
ಮೋಕ್ಷ ಸಾಧಕವಾದ ಪುರುಷಸೂಕ್ತ ಉಪಾಸನೆ ಬಹಳ ಸುಂದರವಾಗಿದೆ. ಇಲ್ಲಿ ಸಾವಿರಾರು ಬಾರಿ, ಅನೇಕ ವರ್ಷಗಳ ತನಕ, ಪುರುಷಸೂಕ್ತ ಯಾಗ ಮಾಡಬೇಕಾಗುತ್ತದೆ. ನಿತ್ಯ ಪುರುಷಸೂಕ್ತ ಅನುಷ್ಠಾನ ಹೇಗಿರಬೇಕು ಅಂದರೆ:  ಕೈಯಿಂದ ಶಿರಸ್ಸಿನ ತನಕ ಹದಿನಾರು ಅಂಗಗಳಲ್ಲಿ ಪುರುಷಸೂಕ್ತದ ಹದಿನಾರು ಮಂತ್ರಗಳಿಂದ ಅಂಗನ್ಯಾಸ ಮಾಡುವುದು; ಪೀಠದಲ್ಲಿನ ಪ್ರತಿಮೆಗೆ ಹದಿನಾರು ಮಂತ್ರಗಳಿಂದ ಅಂಗನ್ಯಾಸ ಮಾಡುವುದು; ಹೃದಯದಲ್ಲಿರುವ ಭಗವಂತನಿಗೆ ಪುರುಷಸೂಕ್ತದಿಂದ ಅರ್ಚನೆ ಮಾಡುವುದು. ಅಗ್ನಿಕುಂಡದಲ್ಲಿ ಅಗ್ನಿಪ್ರತಿಷ್ಠೆ ಪುರುಷಸೂಕ್ತದ ಮಂತ್ರದಿಂದ ಮಾಡಿ, ‘ಓಂ ನಮೋ ನಾರಾಯಣಾಯ ಸ್ವಾಹಾ, ನಾರಾಯಣಾಯ ಇದಂ ನಮಮ”  ಎಂದು ತುಪ್ಪ ಮತ್ತು ಸಮಿದೆಯಿಂದ ಆಹುತಿ ನೀಡುವುದು. ನಂತರ “ಜಿತಂತೇ ಪುಂಡರೀಕಾಕ್ಷ ...."  ಎನ್ನುವ ಸ್ತೋತ್ರದ ಮೂಲಕ ಪುರುಷಸೂಕ್ತ ಪ್ರತಿಪಾಧ್ಯ ಭಗವಂತನನ್ನು ಸ್ತೋತ್ರ ಮಾಡುವುದು. ಹೀಗೆ ದಿನಾಲೂ ಸರ್ವಾರ್ಪಣ ಭಾವದಿಂದ ಈ ರೀತಿ ಭಗವಂತನನ್ನು ಪುರುಷಸೂಕ್ತದಿಂದ ಉಪಾಸನೆ ಮಾಡಿದರೆ, ಅತಿಮಾನುಷ ಶಕ್ತಿ ಪ್ರಾಪ್ತಿಯಾಗಿ[ಉದಾ: ದೂರದರ್ಶನ, ದೂರಶ್ರವಣ, ಇತ್ಯಾದಿ] ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ.
ಋಕ್ ವಿಧಾನದಲ್ಲಿ ಹೇಳುವಂತೆ ಪುರುಷಸೂಕ್ತಕ್ಕೆ ಸಮನಾದ ಇನ್ನೊಂದು ಸೂಕ್ತವಿಲ್ಲ. ಅದು ಮಕ್ಕಳಾಗುವುದಕ್ಕೂ ಸಾಧನ, ಮೋಕ್ಷಕ್ಕೂ ಸಾಧನ. ಇಹದಿಂದ ಪರದ ತನಕ ಸಮಸ್ತ ಪುರುಷಾರ್ಥಗಳಿಗೆ  ಪುರುಷಸೂಕ್ತಕ್ಕೆ ಸಮನಾದ ಇನ್ನೊಂದು ಸೂಕ್ತವಿಲ್ಲ. ಹೇಗೆ ಅಪೌರುಷೇಯ ಮಂತ್ರದಲ್ಲಿ ಪುರುಷಸೂಕ್ತಕ್ಕೆ ಇನ್ನೊಂದು ಮಂತ್ರ ಸಾಟಿ ಇಲ್ಲವೋ, ಹಾಗೇ ಇಡೀ ವೈದಿಕ ಸಾಹಿತ್ಯದಲ್ಲಿ ಪೌರುಷೇಯ ಮಂತ್ರದಲ್ಲಿ ವಿಷ್ಣುಸಹಸ್ರನಾಮಕ್ಕೆ ಸಮನಾದ ಇನ್ನೊಂದು ಮಂತ್ರವಿಲ್ಲ. ಇವೆರಡು ಮಂತ್ರವನ್ನು ಯಾರು ತಮ್ಮ ಜೀವನದಲ್ಲಿ ನಿತ್ಯ ಅಳವಡಿಸಿಕೊಂಡರೋ, ಅವರು ಭಗವಂತ ಮೆಚ್ಚುವ ಕೆಲಸ ಮಾಡುತ್ತಾರೆ, ಮಾಡಿ ಭಗವಂತನನ್ನು ಸೇರುತ್ತಾರೆ.
  
ಇತಿ ಷಟ್ ಪ್ರಶ್ನೋಪನಿಷದಿ ಪ್ರಥಮಃ ಪ್ರಶ್ನಃ
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ  ಮೊದಲ ಪ್ರಶ್ನೆ/ಅಧ್ಯಾಯ  ಮುಗಿಯಿತು.
*******